ಗ್ರ್ಯಾನ್ಷಿಯ

	ಷ್ಯಾರಜೋವ (ಪೊರಿಫರ) ವಿಭಾಗದ ಕ್ಯಾಲ್ಕೇರಿಯ ವರ್ಗಕ್ಕೆ ಸೇರಿದ ಒಂದು ಸ್ಪಂಜುಪ್ರಾಣಿ. ಇದು ಸಮುದ್ರದಲ್ಲಿ ಯಾವುದಾದರೊಂದು ಗಟ್ಟಿ ಪದಾರ್ಥಕ್ಕೆ ಅಂಟಿಕೊಂಡು ತನ್ನ ಜೀವ ಕಾಲವನ್ನು ಕಳೆಯುತ್ತದೆ. ಇದರ ದೇಹದ ಆಕಾರ ಕಲಶದಂತೆ: ಗಾತ್ರ  1/2- 1''. ದೇಹದ ಮೇಲೆ ಆಸ್ಟಿಯಗಳೆಂಬ ಅನೇಕ ರಂಧ್ರಗಳಿವೆ. ದೇಹದ ಮೇಲ್ತುದಿಯಲ್ಲಿ ಆಸ್ಕ್ಯಲಮ್ ಎಂಬ ಒಂದು ದೊಡ್ಡ ದ್ವಾರವಿದೆ. ಆಸ್ಟಿಯಗಳ ಮೂಲಕ ನೀರು ದೇಹದೊಳಕ್ಕೆ ನುಗ್ಗಿ ಅಲ್ಲಿನ ಅಸಂಖ್ಯ ಕಾಲುವೆಗಳೊಳಗೆ ಪ್ರವಹಿಸಿ ಅಲ್ಲಿಂದ ಆಸ್ಕ್ಯುಲಮಿನ ಮೂಲಕ ಹೊರಬರುತ್ತದೆ. ಆಸ್ಕ್ಯುಲಮಿನ ಸುತ್ತ ಸೂಜಿಗಳಂತಿರುವ ಅನೇಕ ಮುಳ್ಳುಗಳಿವೆ (ಸ್ಪಿಕ್ಯೂಲ್ಸ್).

	ಗ್ರ್ಯಾನ್ಷಿಯದ ಆಹಾರಸೇವನಕ್ರಮ ಉಸಿರಾಡುವಿಕೆ ಮತ್ತು ಶುದ್ಥೀಕರಣಗಳೆಲ್ಲ ಉಳಿದ ಸ್ಪಂಜುಪ್ರಾಣಿಗಳಲ್ಲಿದ್ದದಂತೆಯೇ ಇವೆ. ಇದು ನಿರ್ಲಿಂಗ ಹಾಗೂ ಲೈಂಗಿಕ ರೀತಿಯಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ನಿರ್ಲಿಂಗವೃದ್ಧಿ ಅಂಕುರಣ (ಬಡಿಂಗ್) ರೀತಿಯಲ್ಲಿ ನಡೆಯುತ್ತದೆ. ಲೈಂಗಿಕ ರೀತಿಯ ಸಂತಾನಾಭಿವೃದ್ದಿಯಲ್ಲಿ ರೇತ್ರಾಣು ಹಾಗೂ ಅಂಡಗಳು ಸಂಯೋಗವಾಗಿ ಯುಗ್ಮವಾಗಿ ರೂಪುಗೊಳ್ಳುತ್ತವೆ. ಯುಗ್ಮ ಕೆಲಕಾಲಾನಂತರ ಕಶಾಂಗವುಳ್ಳ ಡಿಂಭವಾಗಿ ಬೆಳೆದು ಕೊನೆಗೆ ಪ್ರೌಢಜೀವಿಯಾಗುತ್ತದೆ. ಡಿಂಭಕ್ಕೆ ಆಂಫಿಬ್ಲಾಸ್ಟುಲ ಎಂದು ಹೆಸರು.
(ಎಸ್.ಬಿ.ಎಂ.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ